ಚೇಂಬರ್ಲಿನ್, ಜೋಸೆಫ್
1836-1914. ಬ್ರಿಟಿಷ್ ಮುತ್ಸದ್ದಿ. ಸಾಮ್ರಜ್ಯದ ಏಕತೆ ಮತ್ತು ಸುಂಕ ನೀತಿಯ ಸುಧಾರಣೆಗಳ ವಿಚಾರಗಳಿಗಾಗಿ ಪ್ರಸಿದ್ಧಿ ಪಡೆದ ಈತ 1836ರ ಜುಲೈ 8ರಂದು ಲಂಡನ್‍ನಲ್ಲಿ ಜನ್ಮತಾಳಿದ. ಈತನ ತಂದೆಯ ಹೆಸರೂ ಜೋಸೆಫ್ ಚೇಂಬರ್‍ಲಿನ್. ಮನೆತನದ ಉದ್ಯೋಗ ಪಾದರಕ್ಷೆಗಳ ತಯಾರಿಕೆ ಹಾಗೂ ವಿಕ್ರಯ. ತರುಣ ಜೋಸೆಫ್ 1852ರಲ್ಲಿ ತಂದೆಯ ಸಂಸ್ಥೆಯಲ್ಲೇ ಸೇರಿ ಅದರ ಲಂಡನ್ ಕಾರ್ಯಾಲಯದಲ್ಲಿ ಎರಡು ವರ್ಷ ದುಡಿದ. ಆಮೇಲೆ ಬರ್ಮಿಂಗ್‍ಹ್ಯಾಮ್‍ನಲ್ಲಿ ತಂದೆಯ ಪ್ರತಿನಿಧಿಯಾಗಿ ನೆಟ್ ಫೋಲ್ಡ್ ಸ್ಕ್ರೂ ತಯಾರಿಕೆಯ ಅಂಗಡಿಗೆ ಕಳಿಸಲ್ಪಟ್ಟ. ಅಲ್ಲಿ ಈತ ಅತ್ಯಂತ ಯಶಸ್ವೀ ವ್ಯಾಪಾರಿಯಾಗಿ 1874ರಲ್ಲಿ ಒಂದು ಲಕ್ಷ ಪೌಂಡುಗಳಷ್ಟು ಸಂಪತ್ತುಗಳಿಸಿ ವಿಶ್ರಾಂತಿ ಪಡೆದ.
ಬರ್ಮಿಂಗ್‍ಹ್ಯಾಮ್‍ನಲ್ಲಿ 1808ರಲ್ಲಿ ಸ್ಥಳೀಯ ಲಿಬರಲ್ ಅಸೋಸಿಯೇಷನ್ ಪ್ರಾರಂಭವಾದಾಗ ಜೋಸೆಫ್ ಮುನಿಸಿಪಲ್ ಹಾಗೂ ರಾಜಕೀಯ ಜೀವನ ಪ್ರವೇಶಿಸಿದ. ಜೋಸೆಫ್ ಬಹಳ ಪುರೋಗೊಮೆ ವಿಚಾರದವನಾಗಿದ್ದ. 1869ರಲ್ಲಿ ಬರ್ಮಿಂಗ್‍ಹ್ಯಾಮ್ ನಗರಸಭೆಗೆ ಆಯ್ಕೆಹೊಂದಿದ ಜೋಸೆಫ್ 1873ರ ವರೆಗೂ ಅಲ್ಲಿದ್ದು ಪೌರಸುಧಾರಣೆಯ ಅನೇಕ ಕಾರ್ಯಗಳನ್ನು ಜಾರಿಯಲ್ಲಿ ತಂದ. 1873ರಲ್ಲಿ ನಗರಸಭೆಯಲ್ಲಿ ಲಿಬರಲ್ ಪಕ್ಷಕ್ಕೆ ಬಹುಮತ ಬಂತು. ಜೋಸೆಫ್ ಮೇಯರ್ ಆಗಿ ಆಯ್ಕೆ ಹೊಂದಿದ. 1876ರ ವರೆಗೆ ಆತ ಆ ಸ್ಥಾನದಲ್ಲಿದ್ದ. 

	ಜೋಸೆಫ್ ಚೇಂಬರ್ಲಿನ್ ಬರ್ಮಿಂಗ್‍ಹ್ಯಾಮ್ ನಗರದ ಮೇಯರ್ ಆಗಿ ಮಾಡಿದ ಕೆಲಸ ಆ ದೇಶದ ಪೌರ ಆಡಳಿತ ವ್ಯವಸ್ಥೆಗೊಂದು ಮಾದರಿಯಾಗುವಷ್ಟು ಕ್ರಾಂತಿಕಾರಿಯಾಯಿತು.

	1875ರ ಜನವರಿಯಲ್ಲಿ ಆತ ನೆರೆಸಿದ ಸ್ಥಳೀಯ ನೈರ್ಮಲ್ಯ ಅಧಿಕಾರಿಗಳ ಸಮ್ಮೇಳನದಿಂದ ನಗರ ನೈರ್ಮಲ್ಯ ಹಾಗೂ ಉತ್ತಮ ನಗರಜೀವನ ವ್ಯವಸ್ಥೆಯ ಧ್ಯೇಯವುಳ್ಳ ಆಧುನಿಕ ಆಂದೋಲನವೇ ಪ್ರಾರಂಭವಾಯಿತೆಂದು ಹೇಳಬಹುದು. ಈ ಆಂದೋಲನದಲ್ಲಿ ಆತ ಬಹುಮಟ್ಟಿಗೆ ಯಶಸ್ವಿಯೂ ಜನಪ್ರಿಯನೂ ಆದನಲ್ಲದೆ ನಗರದ ಹೊರಗೂ ಗಮನಾರ್ಹ ವ್ಯಕ್ತಿಯಾದ. ಜೋಸೆಫ್ ಶಾಂತವಾಗಿ ಮತ್ತು ನೇರವಾಗಿ ಮನಮಟ್ಟುವಂತೆ ಹೇಳಬಲ್ಲ ಮಾತುಗಾರನಾಗಿದ್ದ. ಆತನ ತೆಳ್ಳಿಗಿನ ಆಕಾರ, ಕೆತ್ತಿ ತೆಗೆದಂತಿದ್ದ ಮುಖಲಕ್ಷಣಗಳು ಮತ್ತು ಆತ ಹಾಕುತ್ತಿದ್ದ ಒಕ್ಕನ್ನಡಕ-ಇವು ಬಹು ಬೇಗ ವ್ಯಂಗ್ಯ ಚಿತ್ರಕಾರರಿಗೆ ಪ್ರಿಯವಾದವು. ಸ್ನೇಹಿತರಲ್ಲಿ ಔದಾರ್ಯ ತೋರಿಸುವ ಸ್ವಭಾವ ಅವನದಾದರೂ ಸಹಜವಾದ ಉಗ್ರಸ್ವಭಾವದಿಂದಾಗಿ ಅವನು ವಿರೋಧಿಗಳನ್ನು ಗಳಿಸಿಕೊಂಡಿದ್ದ. ಬರ್ಮಿಂಗ್‍ಹ್ಯಾಮ್ ವಿಶ್ವವಿದ್ಯಾಲಯದ ಪ್ರಥಮ ಮತ್ತು ಸಂಸ್ಥಾಪಕ ಕುಲಪತಿಯಾಗಿ (1900) ಜೋಸೆಫ್ ಕೊನೆಯವರೆಗೂ ಬರ್ಮಿಂಗ್ ಹ್ಯಾಮ್ ನಗರದಲ್ಲಿ ಆಸಕ್ತಿ ಕಾಪಾಡಿಕೊಂಡಿದ್ದ.

	ಷೆಫೀಲ್ಡ್‍ನಿಂದ 1874ರಲ್ಲಿ ಪಾರ್ಲಿಮೆಂಟ್ ಚುನಾವಣೆಗೆ ನಿಂತು ಸೋತ ಜೋಸೆಫ್ 1876ರ ಚುನಾವಣೆಯಲ್ಲಿ ಬರ್ಮಿಂಗ್ ಹ್ಯಾಮ್‍ನಿಂದ ನಿಂತು ಅವಿರೋಧವಾಗಿ ಹೌಸ್ ಆಫ್ ಕಾಮನ್ಸ್‍ಗೆ ಆರಿಸಿ ಬಂದ. 1870ರಲ್ಲೇ ನ್ಯಾಷನಲ್ ಎಜುಕೇಷನ್ ಲೀಗ್‍ನ ಕಾರ್ಯಕಾರೀ ಸಮಿತಿಯ ಅಧ್ಯಕ್ಷನಾಗಿ ಜೋಸೆಫ್ ಶಿಕ್ಷಣದ ವಿಚಾರದಲ್ಲಿ ತನಗಿದ್ದ ಆಸಕ್ತಿಯನ್ನು ತೋರಿಸಿದ್ದ. ಸಂಸತ್ತಿನಲ್ಲಿ ಆತನ ಮೊದಲ ಭಾಷಣ (1876ರ ಆಗಸ್ಟ್ 4) ಲಾರ್ಡ್ ಸ್ಯಾಂಡರ್ಸನ ಶೈಕ್ಷಣಿಕ ಶಾಸನದ ಮಸೂದೆಯನ್ನು ಕುರಿತದ್ದಾಗಿತ್ತು.

	1880ರ ಸಾರ್ವತ್ರಿಕ ಚುನಾವಣೆಗಳ ಅನಂತರ ಪ್ರಧಾನಮಂತ್ರಿಯಾಗಿ ಬಂದ ಗ್ಲಾಡ್‍ಸ್ಟನ್ ಪುರೋಗಾಮಿಗಳ ಕರ್ತೃತ್ವಶಕ್ತಿಯನ್ನು ಮನ್ನಿಸಿ ಸರ್ ಚಾಲ್ರ್ಸ್ ಡಿಲ್ಕ್ ಮತ್ತು ಚೇಂಬರ್ಲಿನರನ್ನು ಮಂತ್ರಿಮಂಡಲದಲ್ಲಿ ಸೇರಿಕೊಳ್ಳಬೇಕಾಯಿತು. ಚೇಂಬರ್ಲಿನ್ ಮೊದಲು ಬೋರ್ಡ್ ಆಫ್ ಟ್ರೇಡ್‍ನ ಅಧ್ಯಕ್ಷನಾಗಿ ಸೇರಿ ಆಮೇಲೆ ಸ್ಥಾನಿಕ ಸರ್ಕಾರದ ಬೋರ್ಡಿನ ಅಧ್ಯಕ್ಷನಾದ. ಡಿಲ್ಕ್ ಮತ್ತು ಚೇಂಬರ್ಲಿನ್ ಇಬ್ಬರೂ ಬಹಳ ಪುರೋಗಾಮಿ ವಿಚಾರದವರಿದ್ದರು. ಆದರೆ ಗ್ಲಾಡ್‍ಸ್ಟನ್ ತನ್ನ ಹಳೆಯ ಮಂದಗಾಮಿ ಸ್ನೇಹಿತರತ್ತ ಓಲುತ್ತಿದ್ದ. ಐರ್ಲೆಂಡಿನ ವಿಚಾರದಲ್ಲಿ ಮಾತ್ರ ಬಿರುಕು ಬಹಳ ಆಳವಾಯಿತು. ಚೇಂಬರ್‍ರ್ಲಿನ್ ದಬ್ಬಾಳಿಕೆಯನ್ನು ವಿರೋಧಿಸುತ್ತಿದ್ದ. ಐರಿಷ್ ರಾಷ್ಟ್ರೀಯ ನಾಯಕ ಪಾರ್ನೆಲನೊಂದಿಗೆ ಮಾತುಕತೆ ನಡೆಸಲು ಚೇಂಬರ್ಲಿನ್ 1882ರಲ್ಲಿ ನಿಯುಕ್ತನಾದ. ಸಂಧಾನ ಫಲಿಸಿ ಒಪ್ಪಂದವಾಯಿತು. ಪಾರ್ನೆಲನನನ್ನು ಸೆರೆಮನೆಯಿಂದ ಬಿಡುಗಡೆ ಮಾಡಲಾಯಿತು. ಐರಿಷ್ ಕಾರ್ಯದರ್ಶಿ ಫಾರ್‍ಸ್ಟರ್ ರಾಜೀನಾಮೆ ಕೊಟ್ಟ. ಆತನ ಉತ್ತರಾಧಿಕಾರಿಯಾಗಿ ಬಂದ ಲಾರ್ಡ್ ಎಫ್. ಕ್ಯಾವಿಂಡಿಷ್ ಕೊಲೆಗೆ ಈಡಾದ. ಚೇಂಬರ್ಲಿನನನ್ನೇ ಈ ಅಪಾಯದ ಸ್ಥಾನಕ್ಕೆ ಆರಿಸಲಾಯಿತು. ಆತ ಅದಕ್ಕೆ ಸಿದ್ಧನೂ ಆಗಿದ್ದ. ಆದರೆ ಆತನ ನೇಮಕವಾಗಲಿಲ್ಲ. ಕೊನೆಗೆ 1885ರಲ್ಲಿ ಚೇಂಬರ್ಲಿನ್ ಸಾರ್ವಭೌಮ ಸಂಬಂಧಗಳನ್ನು ದುರ್ಬಲಗೊಳಿಸದೆಯೇ ಐರ್ಲೆಂಡಿಗೆ ಸ್ವಾಯತ್ತತೆ ನೀಡುವ ಯೋಜನೆಯೊಂದನ್ನು ಮಂಡಿಸಿದ. ಇದಕ್ಕೂ ಸಂಸತ್ತಿನಲ್ಲಿ ವಿರೋಧ ಬಂತು. ಡಿಲ್ಕ್ ಮತ್ತು ಚೇಂಬರ್ಲಿನ್ ತಮ್ಮ ಸ್ಥಾನಗಳಿಗೆ ರಾಜೀನಾಮೆಕೊಟ್ಟರು. ಸರ್ಕಾರವೂ ಮುಂಗಡಪತ್ರದ ವಿಚಾರದಲ್ಲಿ ಬಹುಮತ ಕಳೆದುಕೊಂಡು ಸೋತಿತು (ಜೂನ್ 1885). ಅನಂತರವೂ ಚೇಂಬರ್ಲಿನ್ ತನ್ನ ಮೆಚ್ಚಿನ ವಿಷಯಗಳಲ್ಲಿ ಸಕ್ರಿಯವಾದ ಆಸಕ್ತಿ ಉಳಿಸಿಕೊಂಡು ಬಂದ.

	1885ರ ನವೆಂಬರ್ ಚುನಾವಣೆಗಳಲ್ಲಿ ಮತ್ತೆ ಆರಿಸಿ ಬಂದ ಚೇಂಬರ್ಲಿನ್ ಆಗ ಐರ್ಲೆಂಡ್ ಮತಗಳ ಅಗತ್ಯವನ್ನು ಕಂಡುಕೊಂಡಿದ್ದ, ಗ್ಲಾಡ್‍ಸ್ಟನ್ನನಿಗೆ ನೆರವಾಗಲು ಆತನ ಹೋಮ್ ರೂಲ್ ವಿಧೇಯಕದ ಬೆಂಬಲಕ್ಕೆ ನಿಂತ. ಆದರೆ ಮೊದಲಿನಿಂದಲೂ ಐರ್ಲೆಂಡ್ ಬಗ್ಗೆ ಉದಾರವಾಗಿದ್ದು, ಅದಕ್ಕೆ ಅಧಿಕಾರಗಳನ್ನು ಕೊಡಬೇಕೆಂದು ವಾದಿಸುತ್ತಿದ್ದ ಚೇಂಬರ್ಲಿನ್‍ಗೆ ಹೋಮ್ ರೋಲ್ ವಿಧೇಯಕದಲ್ಲಿ ನಿರೀಕ್ಷಿತ ಸೌಲಭ್ಯಗಳು ಕಾಣಲಿಲ್ಲ. ಆದ್ದರಿಂದ ಆತ ತನ್ನ ಬೆಂಬಲವನ್ನು ಹಿಂದೆಗೆದುಕೊಂಡ. ಪರಿಣಾಮವಾಗಿ ಆ ಶಾಸನ ಸಂಸತ್ತಿನಲ್ಲಿ ಬಿದ್ದುಹೋಯಿತು. ಮುಂದಿನ ಚುನಾವಣೆಗಳ ಅನಂತರ ಗ್ಲಾಡ್‍ಸ್ಟನ್ ಸರ್ಕಾರದ ಹೊರಗೇ ಉಳಿಯಬೇಕಾಯಿತು.

	ಚೇಂಬರ್ಲಿನನ ಪ್ರಭಾವ ಸಂಪಾದಿಸುವುದಕ್ಕಾಗಿ ಕನ್ಸರ್‍ವೆಟಿವ್ ಪಕ್ಷ ಆತನ ಪುರೋಗಾಮಿ ಸಾಮಾಜಿಕ ನೀತಿಯನ್ನು ಒಪ್ಪಿಕೊಳ್ಳಬೇಕಾಯಿತು. 1892ರ ಹೊತ್ತಿಗೆ ಲಾರ್ಡ್ ಸಾಲ್ಸ್‍ಬರಿಯ ಮಂತ್ರಿಮಂಡಲ ಅನೇಕ ಪುರೋಗಾಮಿ ಅಧಿನಿಯಮಗಳನ್ನು ಜಾರಿಗೆ ತಂದಾಗ ಚೇಂಬರ್ಲಿನನಿಗೆ ಸಮಾಧಾನವಾಯಿತು. ಕೆನಡ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳ ನಡುವಣ ಮೀನುಗಾರಿಕೆ ವ್ಯಾಜ್ಯದ ತೀರ್ಮಾನಕ್ಕಾಗಿ ಚೇಂಬರ್ಲಿನನನ್ನು ರಾಯಭಾರಿಯಾಗಿ ನೇಮಿಸಿ ಕಳಿಸಲಾಯಿತು. 1885ರಲ್ಲಿ ಎರಡು ದೇಶಗಳ ನಡುವೆ ಒಪ್ಪಂದವಾಯಿತು.

	1892ರಲ್ಲಿ ಚೇಂಬರ್ಲಿನ್ ಮತ್ತೆ ಸಂಸತ್ತಿಗೆ ಆಯ್ಕೆಯಾದ. ಆದರೆ ಆತನ ಯೂನಿಯನಿಸ್ಟ್ ಪಕ್ಷ ಬಹುಮತ ಗಳಿಸಲಿಲ್ಲ. ಗ್ಲಾಡ್‍ಸ್ಟನ್ ಎರಡನೆಯ ಹೋಮ್ ರೂಲ್ ವಿಧೇಯಕ ತಂದಾಗ ಚೇಂಬರ್ಲಿನ್ ಅದನ್ನು ತೀವ್ರವಾಗಿ ಖಂಡಿಸಿದ.

	1895ರಲ್ಲಿ ಲಾರ್ಡ್ ಸಾಲ್ಸ್‍ಬರಿಯ ಮಂತ್ರಿಮಂಡಲದಲ್ಲಿ ಚೇಂಬರ್ಲಿನ್ ವಸಾಹತು ಶಾಖೆಯ ಸಚಿವನಾಗಿ ನೇಮಕವಾದ. ಕಾರ್ಮಿಕ ಪರಿಹಾರ ವಿಧೇಯಕದಲ್ಲಿ ಚೇಂಬರ್ಲಿನ್ ಪ್ರಭಾವವಿತ್ತು. ಈ ನಡುವೆ ದಕ್ಷಿಣ ಆಫ್ರಿಕ ಹೆಚ್ಚಿನ ಗಮನ ಸೆಳೆಯಿತು. 1895ರಿಂದ 1900ರವರೆಗೆ ಚೇಂಬರ್ಲಿನ್ ಅಧಿಕಾರದಲ್ಲಿದ್ದ ಅವಧಿಯಲ್ಲಿ ಬ್ರಿಟಿಷ್ ಮಸಾಹತುಗಳ ಮತ್ತು ಅವುಗಳ ಮಾತೃದೇಶದ ನಡುವಣ ಸಂಬಂಧಗಳಲ್ಲಿ ಒಂದು ಗಮನಾರ್ಹ ತಿರುವು ಸಂಭವಿಸಿತೆಂದು ಹೇಳಲಾಗುತ್ತದೆ. ಆತ ವಾಸ್ತವವಾಗಿ ಸಂರಕ್ಷಣೆ ಹಾಗೂ ವಾಣಿಜ್ಯ ಉದ್ದೇಶಗಳಿಗಾಗಿ ಸಾಮ್ರಾಜ್ಯದ ವಿವಿಧ ಭಾಗಗಳಲ್ಲಿ ಸ್ನೇಹ ಸಂಬಂಧದ ಸ್ಥಾಪನೆಗಾಗಿ ದುಡಿದ. ಆಸ್ಟ್ರೇಲಿಯನ್ ಕಾಮನ್‍ವೆಲ್ತ್ ಅಧಿನಿಯಮ ಆತನ ಮಹತ್ಸಾಧನೆಗಳಲ್ಲೊಂದು. ದಕ್ಷಿಣ ಆಫ್ರಿಕ ಯುದ್ಧಗಳಲ್ಲಿ ಸ್ವಾಧಿಕಾರ ಪಡೆದ ವಸಾಹತುಗಳು ಬ್ರಿಟನ್ನಿಗೆ ನೀಡಿದ ನೆರವಿನಿಂದ ಚೇಂಬರ್ಲಿನ್ನನ ಏಕೀಕೃತ ಸಾಮ್ರಾಜ್ಯ ಸೂತ್ರಕ್ಕೆ ಇನ್ನಷ್ಟು ಪುಷ್ಟಿ ದೊರೆಯಿತು.

	ಸಾಮ್ರಾಜ್ಯಾದ್ಯಂತ ರಾಜಕೀಯ ಏಕತೆಗೆ ಮುಖ್ಯವಾಗಿ ಅಗತ್ಯವಾದ್ದೆಂದರೆ ತೆರಿಗೆ ನೀತಿಯ ಸುಧಾರಣೆಯೇ ಎಂಬುದು 1902ರಲ್ಲಿ ನೆರೆದ ಸಾಗರೋತ್ತರ ವಸಾಹತುಗಳ ಪ್ರಧಾನಿಗಳ ಸಭೆಯಲ್ಲಿ ವ್ಯಕ್ತವಾಯಿತು. ಚೇಂಬರ್ಲಿನ್ ಈ ದಿಶೆಯಲ್ಲಿ ಪ್ರಥಮ ಹೆಜ್ಜೆಯಾಗಿ ಸಾಮ್ರಾಜ್ಯ ಅಧಿಮಾನ (ಇಂಪೀರಿಯಲ್ ಪ್ರಿಫರೆನ್ಸ್) ಸೌಲಭ್ಯ ಕ್ರಮವನ್ನು ಮಂಡಿಸಿದ. ಸಾಮ್ರಜ್ಯಾಂತರ್ಗತ ಪ್ರದೇಶಗಳಲ್ಲಿ ಪರಸ್ಪರ ವಾಣಿಜ್ಯ ವ್ಯವಹಾರಗಳಲ್ಲಿ ತೆರಿಗೆಯ ವಿಚಾರದಲ್ಲಿ ವಿಶೇಷ ಸವಲತ್ತುಗಳಿರಬೇಕೆಂಬುದು ಆತನ ಆಶಯವಾಗಿತ್ತು. ಆ ಪ್ರಕಾರ ವಸಾಹತುಗಳಿಂದ ಆಮದು ಆದ ಧಾನ್ಯದ ಮೇಲಿನ ನೋಂದಣಿ ಸುಂಕವನ್ನು ಬಿಡಬೇಕಾಗುತ್ತಿತ್ತು. ಬ್ರಿಟನ್ನಿನ ಅರ್ಥಮಂತ್ರಿ ಇದಕ್ಕೆ ಗೊಣಗಿದ. ಚೇಂಬರ್ಲಿನ್ ಸೂಚನೆ ಬಿದ್ದುಹೋಯಿತು. ತೆರಿಗೆ ಸುಧಾರಣಾಕ್ರಮ ಸರ್ಕಾರದ ಪರಿಧಿಯನ್ನು ದಾಟಿ ಸಾರ್ವಜನಿಕ ಅಂದೋಲನದ ಸ್ವರೂಪ ಪಡೆಯಿತು. ಚೇಂಬರ್ಲಿನ್ ಅದರ ಮುಖಂಡನಾದ. 1906ರ ಚುನಾವಣೆಯಲ್ಲಿ ಯುನಿಯನಿಸ್ಟ್ ಪಕ್ಷ ಸೋತರೂ ಚೇಂಬರ್ಲಿನ್ ಹಾಗೂ ಆತನ ಅನುಯಾಯಿಗಳು ಜಯಶೀಲರಾದರು.

	1906ರಲ್ಲಿ ಸಂಸತ್ತಿನ ಮೊದಲ ಅಧಿವೇಶನದಲ್ಲಿ ಚೇಂಬರ್ಲಿನ್ ವಿರೋಧ ಪಕ್ಷದ ನಾಯಕನಾಗಿ ಕೆಲಸಮಾಡಿದ. ಆದರೆ ಆತನಿಗೆ ಹಾಗೆ ಮುಂದುವರಿಯುವ ಇಚ್ಛೆ ಇರಲಿಲ್ಲ. ಆ ಅಧಿವೇಶನದ ನಡುವೆಯೇ ಆತನ ರಾಜಕೀಯ ಚಟುವಟಿಕೆಗೆ ತಡೆಯುಂಟಾಯಿತು. ಬರ್ಮಿಂಗ್‍ಹ್ಯಾಮ್‍ನಲ್ಲಿ ಆತನ 70ನೆಯ ಹುಟ್ಟುಹಬ್ಬವನ್ನು ಬಹು ವಿಜೃಂಭಣೆಯಿಂದ ಆಚರಿಸಲಾಯಿತು. ಅನಂತರ ಅವನು ಪಾಶ್ರ್ವ ವಾಯುವಿನಿಂದ ನರಳಿದ. 1910ರಲ್ಲಿ ಮತ್ತೆ ಅವನು ಅವಿರೋಧವಾಗಿ ಸಂಸತ್ತಿಗೆ ಆಯ್ಕೆಯಾದನಾದರೂ ಮುಂದೆಂದೂ ಆತ ಸಾರ್ವಜನಿಕ ಸಭೆಯಲ್ಲಿ ಮಾತನಾಡಲಾಗಲಿಲ್ಲ. 1914ರ ಜುಲೈ 2 ರಂದು ಜೋಸೆಫ್ ಚೇಂಬರ್ಲಿನ್ ತೀರಿಕೊಂಡ. ಬ್ರಿಟನ್ನಿನ ಮಹಾಪುರಷರಿಗೆ ಮೀಸಲಾದ ವೆಸ್ಟ್‍ಮಿನ್‍ಸ್ಟರ್ ಅಬೆಯಲ್ಲಿ ಅವನ ಸಮಾಧಿಗೆ ಅವಕಾಶ ಕೊಡುವ ಗೌರವಯುಕ್ತ ಸೂಚನೆ ಬಂದರೂ ಆತನ ಬಂಧಗಳು ಅದನ್ನು ನಿರಾಕರಿಸಿ ಆತನ ಇಚ್ಚೆಯಂತೆ ಬರ್ಮಿಂಗ್‍ಹ್ಯಾಮ್‍ನಲ್ಲೇ ಅವನ ಶವಸಂಸ್ಕಾರ ಮಾಡಿದರು.

	ಜೋಸೆಫ್ ಚೇಂಬರ್ಲಿನ್ ಮೂರು ಸಲ ಮದುವೆಯಾಗಿದ್ದ. ಹ್ಯಾರಿಯೆಟ್ ಕೆನ್ರಿಕ್ (1863ರಲ್ಲಿ ನಿಧನ), ಫ್ಲಾರೆನ್ಸ್ ಕೆನ್ರಿಕ್ (1876ರಲ್ಲಿ ನಿಧನ) ಮತ್ತು ಮೇರಿ ಎಂಡಿಕಾಟ್-ಈ ಮೂವರು ಆತನ ಪತ್ನಿಯರು. ಆಸ್ಟಿನ್ ಅವನ ಮೊದಲ ಪತ್ನಿಯ ಮಗ. ನೆವಿಲ್ ಎರಡನೆಯಾಕೆಯ ಮಗ. ಈ ಇಬ್ಬರೂ ಪ್ರಖ್ಯಾತ ರಾಜಕಾರಣಿಗಳಾಗಿ ಹೆಸರಾದರು.
(ಜೆ.ಆರ್.ಪಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ